ಮಾರುಕಟ್ಟೆ	
ಸರಕು ಅಥವಾ ಸೇವೆಗಳನ್ನು ಕೊಳ್ಳುವ ಮಾರುವ ವ್ಯವಹಾರ ನಡೆಯುವ ಸ್ಥಳ (ಮಾರ್ಕೆಟ್) ಆದರೆ ಅರ್ಥಶಾಸ್ತ್ರದ ಪ್ರಕಾರ ಮಾರುಕಟ್ಟೆಯೆಂದರೆ ವಿಶಿಷ್ಟ ಸರಕು ಸೇವೆಗಳನ್ನು ಮಾರುವ ಕೊಳ್ಳುವ ಸ್ಥಳವಷ್ಟೇ ಅಲ್ಲದೇ ಕೊಳ್ಳುವವರು ಮತ್ತು ಮಾರುವವರು ಬೆಳೆಸಿಕೊಂಡು ಬಂದ ಪರಸ್ಪರ ಸಂಬಂಧದಿಂದ ಅನಿರ್ಭಂಧ ವ್ಯಾಪಾರ ನಡೆದು ಪದಾರ್ಥದ ಧಾರಣೆಯಲ್ಲಿ ಏಕರೂಪತೆ ಸಾಧಿಸುವ ಯಾವುದೇ ಪ್ರದೇಶ, ಅದು ಎಷ್ಟೇ ವಿಸ್ತಾರವಾಗಿರಲಿ ಸಹಜವಾಗಿ ಮಾರುಕಟ್ಟೆ ಅನಿಸಿಕೊಳ್ಳುವುದು ಎಂದು ಫ್ರೆಂಚ್ ಅರ್ಥಶಾಸ್ತ್ರಜ್ಞ ಕುರ್ನೋ ವ್ಯಾಖ್ಯೆ ನೀಡಿದ್ದಾನೆ. ಮಾರುಕಟ್ಟೆಯ ಎಲ್ಲಾ ಭಾಗಗಳಲ್ಲಿ ಏಕಕಾಲದಲ್ಲಿ ಒಂದು ಸರಕು ಅಥವಾ ಸೇವೆಗೆ ಒಂದೇ ಬೆಲೆ ನೀಡುವ ಆಸಕ್ತಿ ಪ್ರಬಲವಾಗಿ ಬೆಳೆದಾಗ ಅದು ಬಲುಮಟ್ಟಿಗೆ ಪರಿಪೂರ್ಣ ಮಾರುಕಟ್ಟೆ ಎನಿಸುವುದೆಂದು ಮಾರ್ಷಲ್ ಹೇಳಿದ್ದಾನೆ.

ಸಂದರ್ಭ ಮತ್ತು ಪರಿಸರದ ಫಲವಾಗಿ ಮಾರುಕಟ್ಟೆ ಏರ್ಪಡುತ್ತದೆ. ಮಾರುವವರ ಮತ್ತು ಕೊಳ್ಳುವವರ ಸಂಪನ್ಮೂಲಗಳು ಮತ್ತು ಚಟುವಟಿಕೆಗಳು ಒಂದು ನಿರ್ದಿಷ್ಟ ಕ್ಷೇತ್ರದ ಉತ್ಪನ್ನಗಳ ಬೇಡಿಕೆ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆ ಕೇವಲ ಮಾರುವವರು ಕೊಳ್ಳುವವರು ಸೇರುವ ಸ್ಥಳವಲ್ಲ. ಮಾರುವವರೂ, ಕೊಳ್ಳುವವರೂ, ಅಂಚೆ, ದೂರವಾಣಿ, ತಂತಿ, ಕೇಬಲ್ ಅಥವಾ ಬೇರಾವುದೇ ಸಾಧನದ ಮೂಲಕ ಪ್ರತ್ಯಕ್ಷವಾಗಲಿ ಅಪ್ರತ್ಯಕ್ಷವಾಗಲಿ ಕಲೆಯುವುದಾದರೆ ಅದು ಮಾರುಕಟ್ಟೆ ಎನಿಸುತ್ತದೆ.

ಕ್ಲಾರ್ಕ್ ಅಂಡ್ ಕ್ಲಾರ್ಕ್ ಎಂಬ ತಜ್ಞರ ಶಬ್ದಗಳಲ್ಲಿ ಯಾವುದೇ ಕೇಂದ್ರದ ಹತ್ತಿರವಾಗಲಿ ಯಾವುದೇ ಕ್ಷೇತ್ರದಲ್ಲಾಗಲಿ ಒಂದು ವಿಶಿಷ್ಟ ಉತ್ಪಾದನೆಯ ಒಡೆತನವನ್ನು ಬದಲಾಯಿಸುವತ್ತ ಶಕ್ತಿಗಳು ಪೃವೃತ್ತವಾದಾಗ ಮತ್ತು ಆ ಪ್ರದೇಶದತ್ತ ಅಥವಾ ಆ ಪ್ರದೇಶದಿಂದ ಸರಕುಗಳು ಸಾಗಲು ಆರಂಭಿಸಿದಾಗ ಆಯಾ ಕೇಂದ್ರಗಳೇ, ಕ್ಷೇತ್ರಗಳೇ ಮಾರುಕಟ್ಟೆಗಳಾಗಿ ಪರಿಣಮಿಸುವುವು. ಹೀಗಾಗಿ ಮಾರುವವರ ಮತ್ತು ಕೊಳ್ಳುವವರ ಸ್ವತಂತ್ರ ವ್ಯವಹಾರ ಸರಳವಾಗಿ ನಡೆಯುವ ಸ್ಥಳ ಮತ್ತು ಪ್ರದೇಶ ಮಾರುಕಟ್ಟೆಯಲ್ಲಿ ಸೇರಿಕೊಳ್ಳುವುವು, ಬೆಲೆನಿರ್ಧರಿಸುವ ಶಕ್ತಿಗಳ ಕ್ರಿಯೆಯಿಂದ ಸರಕುಗಳು ತನ್ನ ಒಡೆತನವನ್ನು ಬದಲಾಯಿಸಿ ಸ್ಥಳಾಂತರ ಪ್ರಕ್ರಿಯೆಗೆ ಬಲವಾಗುವ ಮಂಡಲವೂ ಮಾರುಕಟ್ಟೆಯಾಗುವುದೆಂದು ಬೆಕ್ ಮನ್ ಡೆವಿಡ್ ಸನ್‍ರು ಹೇಳಿದ್ದಾರೆ. ಮಾರುವವರು ಕೊಳ್ಳುವವರು ಒಂದು ವಿಶಿಷ್ಟ ಸರಕು ಅಥವಾ ಸರಕುಗಳಿಗಾಗಿ ಸ್ಪರ್ಧಾತ್ಮಕ ಪೈಪೋಟಿ ನಡೆಸುತ್ತಿರುವ ಪ್ರತ್ಯೇಕ ಸಂಬಂಧಗಳನ್ನು ಮಾರುಕಟ್ಟೆ ಎನ್ನಬಹುದು. 

ಬಹಳಷ್ಟು ಮಾರುಕಟ್ಟೆಗಳು ಸರಕನ್ನು ಮಾರುವ ಮೊದಲ ವಿಕ್ರಯದಾರನಿಂದ ಹಿಡಿದು ಅದನ್ನು ಕೊಳ್ಳುವ ಕೊನೆಯ ಖರೀದಿದಾರನ ಹಂತದವರೆಗೆ ಅನೇಕ ಮಧ್ಯವರ್ತಿಗಳ ಗುಂಪಿನಿಂದ ಕೂಡಿರುತ್ತದೆ. ಮಾರುಕಟ್ಟೆಯ ಮುಖ್ಯ ಕಾರ್ಯ ಸಾಮಾನ್ಯವಾಗಿ ಅಲ್ಲಲ್ಲಿ ಹರಡಿದ ಸಂಪನ್ಮೂಲಗಳಿಂದ ಉತ್ಪನ್ನಗಳನ್ನು ಶೇಖರಿಸಿ ಬೇಡಿಕೆಯಿರುವ ಹಲವಾರು ಸ್ಥಳಗಳಿಗೆ ಕಳುಹಿಸುವ ಮಾಡುವುದಾಗಿದೆ.
ಮಾರುಕಟ್ಟೆಯನ್ನು ನಾನಾ ಬಗೆಯಾಗಿ ವಿಂಗಡಿಸಬಹುದು:

ಭೌಗೋಳಿಕವಾಗಿ ಮಾರುಕಟ್ಟೆಯ ವ್ಯಾಪ್ತಿಯನ್ನು ಗಮನಿಸಿ ಅವನ್ನು ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳೆಂದು ವಿಂಗಡಿಸಬಹುದು.
ಮಾರುವವರ ದೃಷ್ಟಿಯಿಂದ-ಮಾರುಕಟ್ಟೆಗಳನ್ನು ಪ್ರಾಥಮಿಕ, ದ್ವೀತಿಯಕ ಮತ್ತು ಅಂತಿಮ ಎಂದೂ ವಿಂಗಡಿಸಬಹುದು. 

ಪ್ರಾಥಮಿಕ ಮಾರುಕಟ್ಟೆಯಲ್ಲಿ ಉತ್ಪಾದಕರು ತಾವು ಉತ್ಪಾದಿಸಿದ್ದನ್ನು ಒಟ್ಟಾರೆಯಾಗಿ ವ್ಯಾಪಾರದಾರರಿಗಾಗಲಿ ಅವರ ದಲ್ಲಾಳಿಗಳಿಗಾಗಲಿ ಮಾರುವರು. ಸರಕನ್ನು ಚಿಲ್ಲರೆ ವ್ಯಾಪಾರಸ್ಥರಿಗೆ ಮಾರುವುದಕ್ಕೆ ದ್ವಿತೀಯಕ ಮಾರುಕಟ್ಟೆ ಸೀಮಿತವಾಗಿರುತ್ತದೆ.

ಮಾರಾಟಕ್ಕಿಟ್ಟ ಸರಕು ತನ್ನ ಉತ್ಪಾದನೆಯ ಮೂಲಸ್ಥಳದಿಂದ ದೂರ ಸಾಗಿ ಪ್ರವಾಸದ ಕೊನೆಯ ಹಂತವನ್ನು ಮುಟ್ಟಿದಾಗ ನಡೆಯುವ ವಹಿವಾಟಿಗೆ ಸೀಮಿತವಾದದ್ದು ಅಂತಿಮ ಮಾರುಕಟ್ಟೆ. ಗ್ರಾಹಕರು ತಮಗೆ ಬೇಕಾದ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳಿಂದ ಪಡೆಯುತ್ತಾರೆ. 

ವ್ಯವಹಾರದ ಗಾತ್ರವನ್ನು ಅವಲಂಬಿಸಿ ಮಾರುಕಟ್ಟೆಗಳನ್ನು ಒಟ್ಟಾರೆ ಚಿಲ್ಲರೆ ಮಾರುಕಟ್ಟೆಗಳೆಂದು ವಿಂಗಡಿಸಬಹುದು. ಒಟ್ಟಾರೆ ಮಾರುಕಟ್ಟೆಯಲ್ಲಿ ಸರಕು ಸಗಟಾಗಿ ಬಿಕರಿಯಾಗುತ್ತದೆ. ನೇರವಾಗಿ ಗ್ರಾಹಕರಿಗೆ ಸಣ್ಣ ಪ್ರಮಾಣಗಳಲ್ಲಿ ಬಿಕರಿಯಾಗುವ ಮಾರುಕಟ್ಟೆ ಚಿಲ್ಲರೆ ಮಾರುಕಟ್ಟೆ. ವ್ಯಾಪಾರದ ಸ್ವರೂಪವನ್ನು ಅವಲಂಬಿಸಿ ಮಾರುಕಟ್ಟೆಗಳನ್ನು ಸ್ಥಾನಿಕ ಮತ್ತು ಭವಿಷ್ಯ ಎಂದೂ ವಿಂಗಡಿಸಬಹುದು.

ನಿರ್ದಿಷ್ಟ ಸ್ಥಳದಲ್ಲೆ ನೇರವಾಗಿ ಸರಕುಗಳು ವರ್ಗವಾಗುವುದಾದರೆ ಅಂಥವು ಸ್ಥಾನಿಕ ಮಾರುಕಟ್ಟೆ. ಭವಿಷ್ಯದಲ್ಲಿ ಉತ್ಪನ್ನಗಳ ವಿನಿಮಯದ ಸಲುವಾಗಿ ವ್ಯವಸ್ಥಿತಗೊಂಡದ್ದು ಭವಿಷ್ಯ ಮಾರುಕಟ್ಟೆ, ಇಲ್ಲಿ ಉತ್ಪನ್ನ ಸ್ಥಳದಲ್ಲಿಯೇ ಮಾರುವವನಿಂದ ಕೊಳ್ಳುವವನಿಗೆ ವರ್ಗವಾಗುವುದಿಲ್ಲ. ಭವಿಷ್ಯದಲ್ಲಿ ನೀಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುವುದು.

ಇವಲ್ಲದೆ ತಾತ್ಕಾಲಿಕ, ಅಲ್ಪಾವಧಿ, ಧೀರ್ಘಾವಧಿ ಮಾರುಕಟ್ಟೆಗಳೆಂದು ಧಾನ್ಯ, ಬೆಳ್ಳಿ, ಚಿನ್ನ ಮುಂತಾದ ಮಾರುಕಟ್ಟೆಗಳೆಂದೂ ಇದನ್ನು ವಿಂಗಡಿಸಬಹುದು. 

ಅರ್ಥಶಾಸ್ತ್ರಜ್ಞರ ಪ್ರಕಾರ ಮಾರುಕಟ್ಟೆಗಳಲ್ಲಿ ಇನ್ನೂ ಎರಡು ಮುಖ್ಯ ಪ್ರಭೇಧಗಳಿವೆ. ಪರಿಪೂರ್ಣ ಹಾಗೂ ಅಪರಿಪೂರ್ಣ ಮಾರುಕಟ್ಟೆಗಳು. ಪರಿಪೂರ್ಣ ಮಾರುಕಟ್ಟೆಯಲ್ಲಿ ಉತ್ಪಾದಕ ತನ್ನ ಉತ್ಪನ್ನಗಳನ್ನು ಕೊಳ್ಳುವವರಿಗೆ ನೀಡಿ ಅವರು ಕೊಟ್ಟ ಬೆಲೆಯನ್ನು ಪಡೆಯುತ್ತಾನೆ. ಈ ಬಗೆಯ ವಹಿವಾಟನ್ನು ಪ್ರಾಥಮಿಕ ಉತ್ಪನ್ನಗಳ ಬಿಕರಿಯಲ್ಲಿ ಕಾಣಬಹುದು. ಅಪರಿಪೂರ್ಣ ಮಾರುಕಟ್ಟೆಯಲ್ಲಿ ಉತ್ಪಾದಕ ತನ್ನ ಉತ್ಪನ್ನಕ್ಕೆ ಪಡೆಯಬೇಕಾದ ಬೆಲೆಯನ್ನು ನಿರ್ಧರಿಸಿ ಹೇಳಿ, ಆ ಬೆಲೆಗೆ ಮಾರುಕಟ್ಟೆಯಲ್ಲಿ ಬಿಕರಿಯಾದಷ್ಟನ್ನು ನೀಡುತ್ತಾನೆ. ಕೈಗಾರಿಕಾ ಸರಕುಗಳ ಬಿಕರಿ ಈ ಬಗೆಯದು. 

ಪ್ರಾಣಿ, ಸಸ್ಯ ಮತ್ತು ಖನಿಜ ಮೂಲ ಉತ್ಪನ್ನಗಳ ಮಾರಾಟಕ್ಕೆ ಸಂಬಂದಿಸಿದಂಥವು ಪ್ರಾಥಮಿಕ ಉತ್ಪನ್ನಗಳ ಮಾರುಕಟ್ಟೆಗಳು. ಇಲ್ಲಿ ಬಿಕರಿದಾರ ತನ್ನ ಸರಕಿಗೆ ಬಂದ ಬೆಲೆಯನ್ನು ಪಡೆಯುತ್ತಾನೆ. ಬಹಳ ದೊಡ್ಡ ಕ್ಷೇತ್ರದಲ್ಲಿ ಹರಡಿರುವ ಸಣ್ಣ ಬೇಸಾಯಗಾರರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುವಾಗ ಸ್ಪರ್ಧಾತ್ಮಕ ಪೈಪೋಟಿಗೆ ಇಳಿದಾಗ ಆರ್ಥಿಕವಾಗಿ ಪ್ರಬಲರಾದ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಧಾರಣೆಯಲ್ಲಿ ಇಳಿತವಾಗಬಹುದು. ಕೊಳ್ಳಿಕೆಯನ್ನೂ ಕಡಿಮೆ ಮಾಡಬಹುದು. 

ಕೈಗಾರಿಕಾ ಸರಕಿನ ಮಾರುಕಟ್ಟೆಗಳಲ್ಲಿ ವಸ್ತುಗಳ ಮಾರಾಟಮಾಡುವ ಯಂತ್ರೋತ್ಪಾದಿತ ಅಥವಾ ಕಾರ್ಖಾನೆಯಲ್ಲಿ ಉತ್ಪಾದಿಸಲಾದ ಸರಕುಗಳ ಮಾರಾಟ ನಡೆಯುತ್ತದೆ. ಪ್ರತಿಯೊಂದು ಕಂಪನಿಯೂ ತನ್ನದೇ ಆದ ರೀತಿ, ಖ್ಯಾತಿ ಸ್ಥಳಗಳನ್ನು ಹೊಂದಿರುತ್ತದೆ. ವ್ಯಾಪಾರದ ಚಿಹ್ನೆಗಳಿಗೂ ಹೆಸರುಗಳೂ ಪ್ರಭಾವ ಬೀರುತ್ತದೆ. ವ್ಯಾಪಾರದ ವಿನೂತನ ರೀತಿ-ನೀತಿಗಳ ಬಳಕೆಯಾಗುತ್ತದೆ, ಇದು ಪರಿಪೂರ್ಣ ಮಾರುಕಟ್ಟೆಗಳ ರೀತಿ ನೀತಿಗಳಿಂದ ಭಿನ್ನವಾಗಿರುತ್ತದೆ. ಇವು ಅಪರಿಪೂರ್ಣ ಮಾರುಕಟ್ಟೆಗಳು ಎನ್ನಲಾಗಿದೆ.

ಹಣದ ಮಾರುಕಟ್ಟೆ:-ಇದು ಸಾಮಾನ್ಯವಾಗಿ ವ್ಯವಸ್ಥಿತ ವಿನಿಮಯ ಕೇಂದ್ರವಲ್ಲ, ಹಣದ ಮಾರುಕಟ್ಟೆಯಲ್ಲಿ ಹಣವೇ ವಿನಿಮಯವಾಗಬೇಕೆಂದೂ ಇಲ್ಲ, ಹಣದ ಸಗಟು ವ್ಯಾಪಾರಕ್ಕೆ ಮತ್ತು ದೊಡ್ಡ ದೊಡ್ಡ ವಾಣಿಜ್ಯ ಬ್ಯಾಂಕುಗಳು ಅಲ್ಪಾವಧಿ ಸಾಲಗಳನ್ನು ಕೊಡುವ ಆರ್ಥಿಕ ನೆರವಿಗೆ ಇದು ಅನ್ವಯವಾಗುತ್ತದೆ.

ಮಾರುಕಟ್ಟೆ ಬೆಳವಣಿಗೆ ಮೊದಲು -ಸ್ಥಳೀಯವಾಗಿತ್ತು. ಉದಾಹರಣೆಗೆ ಗ್ರಾಮೀಣ ಸಂತೆ, ಜಾತ್ರೆ, ಇತ್ಯಾದಿಗಳು. ಸಾಮಾಜಿಕ ಬದಲಾವಣೆಗಳೊಡನೆ ಆರ್ಥಿಕ ವ್ಯವಹಾರದ ವಿಕಾಸದೊಡನೆ ಮಾರುಕಟ್ಟೆಯ ಬೆಳವಣಿಗೆಯೂ ವಿಸ್ತಾರಗೊಂಡಿತು. ನಗರ ಪಟ್ಟಣಗಳಲ್ಲಿ ವ್ಯಾಪಾರದ ಮಾರುಕಟ್ಟೆ ಪ್ರಾರಂಭವಾದವು. ಬಹುಕಾಲದ ಹಿಂದಿನಿಂದ ವ್ಯಾಪಾರಸ್ಥರು, ಸಾಹಸಿಗಳು, ಫಿನೀಷಿಯಾದ ನೆಲಸು ನಾಡಿನವರು. ಅರಬ್ಬೀ ಜನರು ತಮ್ಮ ಪ್ರಾಣ ಹಾಗೂ ಬಂಡವಾಳವನ್ನು ಲೆಕ್ಕಿಸದೇ ಉತ್ಪನ್ನಗಳನ್ನು ಒಂದು ಪ್ರಾಂತದಿಂದ ಇನ್ನೊಂದೆಡೆ ತೆಗೆದುಕೊಂಡು ಹೋಗುತ್ತಿದ್ದರು. ಮುಂದೆ ಇದೇ ಸುಧಾರಣೆಗೊಂಡು ಅಂತಾರಾಷ್ಟ್ರೀಯ ವ್ಯಾಪಾರದ ಸಲುವಾಗಿ ಆ ಮಟ್ಟದ ಮಾರುಕಟ್ಟೆಗಳೂ ಬೆಳೆದು ಬಂದವು. ರಾಷ್ಟ್ರದ ಹಣಕಾಸಿನ ಸ್ವರೂಪ ಹಾಗೂ ಕಾರಣಗಳ ವಿಶ್ಲೇಷಣೆ ಮಾಡುತ್ತ ಆ್ಯಡಮ್ ಸ್ಮಿತ್ ಹೇಳಿದ ಒಂದು ಮಾತು ಮಾರುಕಟ್ಟೆಗೆ ಅನ್ವಯವಾಗುತ್ತದೆ.: ಉತ್ಪಾದನೆ ಗಾತ್ರ ಅದರ ಉದ್ಯಮ ಸ್ವರೂಪದಲ್ಲಿದೆ. ಮಾರುಕಟ್ಟೆ ಎಷ್ಟು ವಿಸ್ತಾರವೋ ಉತ್ಪಾದನೆಯ ಗಾತ್ರ ಅಷ್ಟಕ್ಕೆ ಸೀಮಿತವಾಗಿರುತ್ತದೆ ಎಂದು ಅವನು ಹೇಳಿದ್ದಾನೆ. ಅಭಿರುಚಿ ಮತ್ತು ವೈಜ್ಞಾನಿಕ ತಾಂತ್ರಿಕ ಬದಲಾವಣೆಗಳಿಂದ ಮಾರುಕಟ್ಟೆಯ ಉತ್ಪಾದನೆಯ ಗಾತ್ರವೂ ಬೆಳೆಯಿತು. ಮಾರುಕಟ್ಟೆಗಳು ಬೆಳೆದಂತೆ ದೇಶಗಳು ಅಭಿವೃದ್ದಿ ಹೊಂದಿದವು. ಹೆಚ್ಚು ಪೈಪೋಟಿಗಳಿರುವ ಮಾರುಕಟ್ಟೆಗಳಲ್ಲಿ ಭಾಗವಹಿಸುವವರೆಲ್ಲರೂ ಗಳಿಸುವ ಲಾಭಕ್ಕೆ ತಕ್ಕಂತೆ ಆಯಾ ಮಾರುಕಟ್ಟೆಗಳಲ್ಲಿ ಸಂಪನ್ಮೂಲಗಳ ವಿತರಣೆ ನಡೆಯುತ್ತದೆ. ಕಾಣದ ಕೈಯೊಂದು ಪದಾರ್ಥಗಳ ಧಾರಣೆಯನ್ನು ಆಯಾ ಮಾರುಕಟ್ಟೆಗಳಲ್ಲಿ ನಿರ್ಧರಿಸುವುದು.

ಉತ್ಪಾದನೆ ಅಧಿಕವಾಗಿ ಮಾರಬಹುದಾದ ಪದಾರ್ಥಗಳು ಹೆಚ್ಚುವರಿಯಾದ್ದರಿಂದಲೇ ಮಾರುಕಟ್ಟೆಗಳು ಅಸ್ತಿತ್ವಕ್ಕೆ ಬರಲಿಲ್ಲ. ಒಮ್ಮೊಮ್ಮೆ ಉತ್ಪತ್ತಿ ಕಡಿಮೆಯಾಗಿದ್ದರೂ ಬೇರೆ ಸರಕುಗಳನ್ನು ಪಡೆಯುವುದಕ್ಕಾಗಿ ವ್ಯಾಪಾರ ವಿನಿಮಯ ನಡೆಸುವ ಸಲುವಾಗಿ ಮಾರುಕಟ್ಟೆಗಳು ಅಸ್ಥಿತ್ವಕ್ಕೆ ಬಂದವು. ಶ್ರಮವಿಭಜನೆಯೂ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿವೆ. ಆರ್ಥಿಕ ಅಭಿವೃದ್ಧಿಗೆ ಇದು ಕಾರಣವಾಗಿದೆ.
ಮಾರುಕಟ್ಟೆಗಳ ಅಕ್ರಮ ಪ್ರವೃತ್ತಿಗಳನ್ನು ತಡೆಗಟ್ಟಿ ಅದನ್ನು ಸುಧಾರಿಸಲು ಭಾರತ ಸರ್ಕಾರ ನೇಮಿಸಿದ್ದ ಆಯೋಗ 1928ರಲ್ಲಿ ಸಲ್ಲಿಸಿದ ವರದಿಯಲ್ಲಿ ಅಕ್ರಮಗಳ ನಿವಾರಣೆ ಹಾಗೂ ನಿಯಂತ್ರಿತ ಮಾರುಕಟ್ಟೆಗಳ ಸ್ಥಾಪನೆಗೆ ಶಿಫಾರಸ್ಸುಗಳನ್ನು ಸಲ್ಲಿಸಿತು. ಅದರ ಪರಿಣಾಮವಾಗಿ ಭಾರತದ ವಿವಿಧ ರಾಜ್ಯಗಳಲ್ಲಿ ಮಾರಾಟ ಕಾನೂನುಗಳು ಜಾರಿಗೆ ಬಂದಿವೆ. ದೇಶಾದ್ಯಂತ ನಿಯಂತ್ರಿತ ಮಾರುಕಟ್ಟೆಗಳು ಸ್ಥಾಪಿತವಾಗಿವೆ.
(ಎಂ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ